Sunday, October 11, 2009

ಜೈಮಿನಿ ಭಾರತ - ಹುಣ್ಣಿಮೆಯ ವರ್ಣನೆ

ಪ್ರಾಚೀನಿತ೦ಬಿನಿಯ ಮುಖಬಿ೦ಬದೆಳನಗೆಯ
ರೋಚಿಗಳೋ ಪೆರ್ಚಿಗೆಯೊಳು ಉಚ್ಚೆದ್ದ ಪಾಲ್ಗಡಲ
ವೀಚಿಗಳೋ ಮನ್ಮಥನ ಕೀರ್ತಿಯ ಮರೀಚಿಗಳೋ ನಿಜಕಾ೦ತನ೦ ಕಾಣುತ
ನಾಚಿಬೆಳ್ವೇರಿದಳೋ ರಾತ್ರಿ ವಧು ಚೆಲ್ಲಿದನೋ
ಭೂ ಚಕ್ರಕ೦ಗಜ೦ ಬೇಳುವೆಯ ಬೂದಿಯ೦
ವಾಚಿಸುವೊಡರಿದೆನಲ್ ಪಸರಿಸಿತು ಚ೦ದ್ರಕಿರಣ೦ಗಳೆಲ್ಲಾ ದೆಸೆಯೊಳು.


ಪ್ರಾಚೀ - ಪೂರ್ವ; ನಿತ೦ಬಿನಿ - ಸು೦ದರವಾದ ನಿತ೦ಬವುಳ್ಳವಳು, ಚೆಲುವೆ. (ನಿತ೦ಬ - ಸೊ೦ಟದ ಹಿ೦ದಿನ ಕೆಳಭಾಗ);
ರೋಚಿ - ೧ ಬೆಳಕು, ಕಾಂತಿ ೨ ಕಿರಣ, ರಶ್ಮಿ, ; ಪೆರ್ಚಿಗೆ - ಹೆಚ್ಚಿಗೆ, ಅತಿಶಯ; ಪಾಲ್ಗಡಲ - ಕ್ಷೀರಸಾಗರ;
ವೀಚಿ - ಸಣ್ಣ ಅಲೆ, ತರಂಗ; ಮರೀಚಿ - ೧ ಕಿರಣ, ರಶ್ಮಿ ೨ ಬೆಳಕು, ಕಾಂತಿ; ನಿಜಕಾ೦ತನ೦ - ನಿಜ - ಸ್ವ೦ತ, ಕಾ೦ತ - ಪ್ರಿಯಕರ; ಬೆಳ್ವೇರಿದಳೋ - ಹೊಳೆದಳೋ; ಬೇಳುವೆ = ಬೇಳ್ವೆ - ಮರುಳು, ಮಾಯೆ; ಒಡರು - ರಚಿಸು; ಪಸರಿಸಿತು - ಹರಡಿತು; ದೆಸೆ - ದಿಕ್ಕು

Wednesday, September 23, 2009

ಜೈಮಿನಿ ಭಾರತ - ಭದ್ರಾವತಿಯ ವರ್ಣನೆ

ಈ ವನದ ನಡುನಡುವೆ ತೊಳತೊಳಗುತಿಹ ಸ
ರೋವರ ವರದೊಳ ದಳೆದಳೆದು ಬೆಳೆಬೆಳೆದ ರಾ
ಜೀವದಲರಲರ ತುಳಿತುಳಿ ದಿಡಿದಿಡಿದ ಬ೦ಡೆ ನೋಡ ನೋಡನೆ ಸವಿದು ಸವಿದು
ಅವಗವಗಲದೆ ಯುಗ ಯುಗಮಾಗಿ ನೆರೆನೆರೆದು
ಕಾವ ಸೊಗಸೊಗಸಿನಲಿ ನಲಿನಲಿದು ಮೊರೆಮೊರೆವ ಭೃ೦
ಗಾವಳಿಯಗಾವಳಿಯ ಕಳಕಳ೦ಗಳ ನೋಡುನೋಡು ರವಿತನಯತನಯ
ಕೆಲವು ಪದಗಳ ಅರ್ಥ::
ತೊಳಗು - ಹೊಳೆ, ಪ್ರಕಾಶಿಸು ; ವರದ - ಅನುಗ್ರಹಿಸುವ; ದಳೆ - ಹರಡು, ವ್ಯಾಪಿಸು;
ರಾಜೀವ - ತಾವರೆ, ಕಮಲ; ದಲ = ದಳ - ದಟ್ಟಣೆ, ನಿಬಿಡತೆ; ತುಳಿ - ಮೆಟ್ಟು
ಇಡಿ - (೧) ತು೦ಬಿರು, ನಿಬಿಡವಾಗು (೨) ಅದುಮಿತು೦ಬು
ಅವಗ - ? ; ಯುಗ - ಜೋಡಿ, ಜೊತೆ; ನೆರೆ - ಅಧಿಕವಾಗು, ಹೆಚ್ಚಾಗು, ಉಕ್ಕು
ಕಾವ - ಕಾಮ, ಮನ್ಮಥ; ಸೊಗಸು - ಸೊಗಸಿಯಿಸು, ಅ೦ದವಾಗಿ ಕಾಣು, ರ೦ಗೊಳಿಸು
ಭೃ೦ಗ - ದು೦ಬಿ; ಗಾವಳಿ - (೧) ಸದ್ದು (೨) ಸಮೂಹ; ಕಳ - ಆಟದ ಮೈದಾನ
ರವಿತನಯತನಯ - ಕರ್ಣನ ಮಗ ವೃಷಕೇತು
ಹಿನ್ನೆಲೆ:
ಜೈಮಿನಿ ಭಾರತದ ೩ ನೇ ಸ೦ಧಿ. ಭೀಮಸೇನನು ಹಸ್ತಿನಾವತಿಯನ್ನು ಬಿಟ್ಟು ಹೊರಟು ಭದ್ರಾವತಿಯ (ಕರ್ನಾಟಕದ ?)
ಸಮೀಪದಲ್ಲಿರುವ ಗುಡ್ಡದ ಮೇಲೆ ನಿ೦ತು ಭದ್ರಾವತಿಯ ವಿಸ್ತಾರವನ್ನು ವೃಷಕೇತುವಿಗೆ ತೋರಿಸಿದನು.
ಆಧಾರ: ಜೈಮಿನಿ ಭಾರತ ಕಥಾ ಸ೦ಗ್ರಹ. ಸ೦ಗ್ರಹ: ಶ್ರೀ ಜಿ.ವಿ.ಶಾಸ್ತ್ರೀ (ಪುಟ: ೨೦, ೨೧, ೨೨)
ಕಾವ್ಯ ಸೊಬಗು: ಇದೊ೦ದು ಶಬ್ದಾಲ೦ಕಾರ. ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವ ಕಲೆ ಅಲ೦ಕಾರ. ಶಬ್ದಗಳ ಮೂಲಕ ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವುದು ಶಬ್ದಾಲ೦ಕಾರ.
ಶಬ್ದಾಲ೦ಕಾರದಲ್ಲಿ ಎರಡು ವಿದ - ಯಮಕ ಮತ್ತು ಅನುಪ್ರಾಸ. ಪಾದದಲ್ಲಿ ಒ೦ದೋ ಎರಡೋ ಅಕ್ಷರಗಳು ಪದೇ ಪದೇ ಬರುವುದು ಅನುಪ್ರಾಸ.
(ಆಧಾರ: ಕನ್ನಡ ವ್ಯಾಕರಣ ಪ್ರವೇಶ, ಟಿ.ಎಸ್.ಗೋಪಾಲ್)

Sunday, July 26, 2009

ಮರೆಯಲಾದೀತೆ ?... ಬೆಳಗೆರೆ ಕೃಷ್ಣಶಾಸ್ತ್ರಿ

ವನಮಾಲಿಯಂದದಿಂ ಪದ್ಮಿ ಪದ್ಮಿಯವೋಲ್ ಭು
ವನಕುಕ್ಷಿ ಭುವನಕುಕ್ಷಿಯ ತೆರದೆ ಹಂಸಲೋ
ಚನಶೋಭಿ ಹಂಸಲೋಚನಶೋಭಿಯಂತೆ ವರಚಕ್ರಿ ವರಚಕ್ರಿಯವೋಲು
ಅನಿಮಷಾಶ್ರಯ ಮೂರ್ತಿಯನಿಮಿಷಾಶ್ರಯಮೂರ್ತಿ
ಯೆನೆ ಕುವಲಯಾಧಾರಿ ಕುವಲಯಾಧಾರಿವೋಲ್
ವನಮಾಲಿಯೆನಿಸಿ ರಂಜಿಸುವ ಕಾಸರಮಂ ಸರ್ವಮಂಗಳೆ ಕಂಡಳು

ಇದೊಂದು ಮಾಲೋಪ ಮಾಲಂಕರ. ಸರೋವರವನ್ನು, ವಿಷ್ಣುವನ್ನು ಹೂಮಾಲೆ ಕಟ್ಟುವ ಪ್ರಕ್ರಿಯೆಯ ಲಯದಲ್ಲಿ ವರ್ಣಿಸಿರುವುದು ಈ ಪದ್ಯದ ವಿಶೇಷ.

'ವನಮಾಲಿ' ಎಂದರೆ ವಿಷ್ಣು - ಕಮಲದ ಹಾರಗಳನ್ನು ಧರಿಸಿರುವನು ವಿಷ್ಣು . ಕಮಲ ಪುಷ್ಪಗಳಿಂದ ಮಾಲೆಯ ಹಾಗಿರುವ ಸರೋವರ . ( ಪದ್ಮಿ - ಸರೋವರ )
ಭುವನ ಎಂದರೆ ಭೂಮಿ - ಇಡೀ ಭೂಮಂಡಲವನ್ನು ತನ್ನ ಹೊಟ್ಟೆಯಲ್ಲಿ ಅಡಗಿಸಿ ಇಟ್ಟಿಕೊಂಡಿರುವವನು - ವಿಷ್ಣು. ಭು ಎಂದರೆ ನೀರು, ಯಾವುದು ನೀರನ್ನು ತನ್ನ ಒಡಲಿನಲ್ಲಿ ಇಟ್ಟುಕೊಂಡಿದೆಯೋ - ಆ ಸರೋವರ.
ಹಂಸಲೋಚನ ಎಂದರೆ ವಿಷ್ಣು - ಹಂಸದಂತೆ ಕಣ್ಣು ಉಳ್ಳವನು. ಹಾಗೆಯೇ ಸರೋವರದಲ್ಲಿ ಹಂಸ ಪಕ್ಷಿಗಳೂ ಇವೆ.
ವರಚಕ್ರಿ ವಿಷ್ಣುವಿನ ಹೆಸರು. ಆ ಸರೋವರದಲ್ಲಿ ಚಕ್ರವಾಕ ಪಕ್ಷಿಗಳು ಇವೆ.
ಅನಿಮಿಷ ಎಂದರೆ ದೇವತೆಗಳು - ದೇವತೆಗಳಿಗೆ ಆಶ್ರಯ ನೀಡಿರುವನು ವಿಷ್ಣು. ನಮ್ಮಲ್ಲಿ ಕಾಲಗಣನೆಗೆ ಕಣ್ ರೆಪ್ಪೆಯನ್ನು ಅದಾರವಾಗಿ ಇಟ್ಟುಕೊಳ್ಳುವ ಕ್ರಮ ಇದೆ. ರೆಪ್ಪೆ ಮುಚ್ಚಿ ತೆಗೆಯುವ ಅವಧಿಗೆ ನಿಮಿಷ ಎಂದೂ ಕರೆಯುತ್ತಾರೆ. ಕಣ್ ರೆಪ್ಪೆ ಇರದ ಪ್ರಾಣಿಗಳಲ್ಲಿ ಮೀನೂ ಸಹ ಒಂದು.
ಕುವಲಯ ಎಂದರೆ ಭೂಮಂಡಲ - ಯಾರು ಭೂಮಂಡಲಕ್ಕೆ ಆಧಾರ ವಾಗಿದ್ದಾನೆಯೋ - ಆತ ವಿಷ್ಣು. ಕು - ಎಂದರೆ ನೀರು ಎಂಬ ಅರ್ಥವೂ ಇದೆ. ಕುವಲಯಧಾರಿ ಎಂದರೆ ನೀರಿನ ಸಮೂಹ.

ಹೀಗೆ ವನಮಾಲಿ ಎಂಬ ಶಬ್ದದಿಂದ ಶುರು ಮಾಡಿದ ಲಕ್ಷ್ಮೀಶ ಹೂವಿನ ಮಾಲೆ ಕೊನೆಯ್ಯಲ್ಲಿ ವನಮಾಲಿ ಎಂಬುದರಿಂದಲೇ ಕೊನೆ ಮಾಡುತ್ತಾನೆ ( ಎರಡು ಕೊನೆಯ ದಾರಗಳನ್ನು ಗಂಟು ಹಾಕುವ ಹಾಗೆ ).

ಕೆಲವು ಪದಗಳ ಅರ್ಥ:
ಕುಕ್ಷಿ - ಬಸಿರು, ಹೊಟ್ಟೆ
ತೆರ - ರೀತಿ, ಕ್ರಮ.
ಶೋಭಿ - ಶೋಭಿಸುವುದು
ವೋಲು - ಅಂತೆ, ಹಾಗೆ

ಕವಿ ಲಕ್ಷ್ಮೀಶನ ಜೈಮಿನಿ ಭಾರತ

ಈ ಬ್ಲಾಗಿನ ಉದ್ದೇಶ ಲಕ್ಷ್ಮೀಶ ಕವಿಯ ಜೈಮಿನಿ ಭಾರತ ಎಂಬ ಉಪ್ಪಿನಕಾಯಿ ಜಾಡಿಯಿಂದ ಒಂದೊಂದೇ ಹೋಳುಗಳನ್ನು ಹೆಕ್ಕಿ ಹೊರತೆಗೆದು ಅದರ ರಸವನ್ನು ಚರ್ವಿತ ಚರ್ವಣವಾಗಿ ಹೀರುವುದು !

ಮೂಲ ಕವಿ ಲಕ್ಷ್ಮೀಶನಾದರೂ, ಅವನ ಉಗ್ರಾಣದಿಂದ ಉಣಬಡಿಸಿದವರು ಎಷ್ಟೋ ಮಹನೀಯರು. ಅವರ ಹೆಸರುಗಳನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದೆ.