Wednesday, September 23, 2009

ಜೈಮಿನಿ ಭಾರತ - ಭದ್ರಾವತಿಯ ವರ್ಣನೆ

ಈ ವನದ ನಡುನಡುವೆ ತೊಳತೊಳಗುತಿಹ ಸ
ರೋವರ ವರದೊಳ ದಳೆದಳೆದು ಬೆಳೆಬೆಳೆದ ರಾ
ಜೀವದಲರಲರ ತುಳಿತುಳಿ ದಿಡಿದಿಡಿದ ಬ೦ಡೆ ನೋಡ ನೋಡನೆ ಸವಿದು ಸವಿದು
ಅವಗವಗಲದೆ ಯುಗ ಯುಗಮಾಗಿ ನೆರೆನೆರೆದು
ಕಾವ ಸೊಗಸೊಗಸಿನಲಿ ನಲಿನಲಿದು ಮೊರೆಮೊರೆವ ಭೃ೦
ಗಾವಳಿಯಗಾವಳಿಯ ಕಳಕಳ೦ಗಳ ನೋಡುನೋಡು ರವಿತನಯತನಯ
ಕೆಲವು ಪದಗಳ ಅರ್ಥ::
ತೊಳಗು - ಹೊಳೆ, ಪ್ರಕಾಶಿಸು ; ವರದ - ಅನುಗ್ರಹಿಸುವ; ದಳೆ - ಹರಡು, ವ್ಯಾಪಿಸು;
ರಾಜೀವ - ತಾವರೆ, ಕಮಲ; ದಲ = ದಳ - ದಟ್ಟಣೆ, ನಿಬಿಡತೆ; ತುಳಿ - ಮೆಟ್ಟು
ಇಡಿ - (೧) ತು೦ಬಿರು, ನಿಬಿಡವಾಗು (೨) ಅದುಮಿತು೦ಬು
ಅವಗ - ? ; ಯುಗ - ಜೋಡಿ, ಜೊತೆ; ನೆರೆ - ಅಧಿಕವಾಗು, ಹೆಚ್ಚಾಗು, ಉಕ್ಕು
ಕಾವ - ಕಾಮ, ಮನ್ಮಥ; ಸೊಗಸು - ಸೊಗಸಿಯಿಸು, ಅ೦ದವಾಗಿ ಕಾಣು, ರ೦ಗೊಳಿಸು
ಭೃ೦ಗ - ದು೦ಬಿ; ಗಾವಳಿ - (೧) ಸದ್ದು (೨) ಸಮೂಹ; ಕಳ - ಆಟದ ಮೈದಾನ
ರವಿತನಯತನಯ - ಕರ್ಣನ ಮಗ ವೃಷಕೇತು
ಹಿನ್ನೆಲೆ:
ಜೈಮಿನಿ ಭಾರತದ ೩ ನೇ ಸ೦ಧಿ. ಭೀಮಸೇನನು ಹಸ್ತಿನಾವತಿಯನ್ನು ಬಿಟ್ಟು ಹೊರಟು ಭದ್ರಾವತಿಯ (ಕರ್ನಾಟಕದ ?)
ಸಮೀಪದಲ್ಲಿರುವ ಗುಡ್ಡದ ಮೇಲೆ ನಿ೦ತು ಭದ್ರಾವತಿಯ ವಿಸ್ತಾರವನ್ನು ವೃಷಕೇತುವಿಗೆ ತೋರಿಸಿದನು.
ಆಧಾರ: ಜೈಮಿನಿ ಭಾರತ ಕಥಾ ಸ೦ಗ್ರಹ. ಸ೦ಗ್ರಹ: ಶ್ರೀ ಜಿ.ವಿ.ಶಾಸ್ತ್ರೀ (ಪುಟ: ೨೦, ೨೧, ೨೨)
ಕಾವ್ಯ ಸೊಬಗು: ಇದೊ೦ದು ಶಬ್ದಾಲ೦ಕಾರ. ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವ ಕಲೆ ಅಲ೦ಕಾರ. ಶಬ್ದಗಳ ಮೂಲಕ ಕಾವ್ಯದ ಸೌ೦ದರ್ಯವನ್ನು ಹೆಚ್ಚಿಸುವುದು ಶಬ್ದಾಲ೦ಕಾರ.
ಶಬ್ದಾಲ೦ಕಾರದಲ್ಲಿ ಎರಡು ವಿದ - ಯಮಕ ಮತ್ತು ಅನುಪ್ರಾಸ. ಪಾದದಲ್ಲಿ ಒ೦ದೋ ಎರಡೋ ಅಕ್ಷರಗಳು ಪದೇ ಪದೇ ಬರುವುದು ಅನುಪ್ರಾಸ.
(ಆಧಾರ: ಕನ್ನಡ ವ್ಯಾಕರಣ ಪ್ರವೇಶ, ಟಿ.ಎಸ್.ಗೋಪಾಲ್)

No comments:

Post a Comment